KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಜ್ಞಾನೋಕ್ತಿಗಳು 10

ಎಲ್ಲಾ · ಜ್ಞಾನೋಕ್ತಿಗಳುಹುಡುಕಿ

1ಸೊಲೊಮೋನನ ಜ್ಞಾನೋಕ್ತಿಗಳು: ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ. ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.

2ಅನ್ಯಾಯದ ಸಂಪತ್ತುಗಳು ಶಾಶ್ವತವಲ್ಲ, ಆದರೆ ನೀತಿಯು ಮರಣದಿಂದ ಬಿಡಿಸುತ್ತದೆ.

3ನೀತಿವಂತನನ್ನು ಹಸಿವೆಯಿಂದ ಬಳಲುವಂತೆ ಯೆಹೋವ ದೇವರು ಬಿಡುವುದಿಲ್ಲ; ಆದರೆ ದುಷ್ಟರ ಆಶೆಯನ್ನು ಅವರು ಭಂಗಪಡಿಸುತ್ತಾರೆ.

4ಆಲಸ್ಯದ ಕೈ ದರಿದ್ರನನ್ನಾಗಿ ಮಾಡುವದು; ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.

5ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು, ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.

6ನೀತಿವಂತರ ತಲೆಯ ಮೇಲೆ ಆಶೀರ್ವಾದವಿದೆ; ಆದರೆ ದುಷ್ಟರ ಬಾಯಲ್ಲಿ ಕ್ರೌರ್ಯ ಅಡಗಿದೆ.

7ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ; ಆದರೆ ದುಷ್ಟನ ಹೆಸರು ಕೊಳೆಯುವುದು.

8ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು; ಆದರೆ ಹರಟೆಯ ಮೂರ್ಖನು ಬೀಳುವನು.

9ಯಥಾರ್ಥ ನಡತೆಯವರು ಸುರಕ್ಷಿತವಾಗಿ ಜೀವಿಸುತ್ತಾರೆ; ಆದರೆ ವಕ್ರಮಾರ್ಗಗಳಲ್ಲಿ ನಡೆಯುವವನು ಬಯಲಿಗೆ ಬರುವನು.

10ದುರುದ್ದೇಶದಿಂದ ಕಣ್ಣು ಮಿಟಕಿಸುವವನು ದುಃಖವನ್ನು ಉಂಟುಮಾಡುತ್ತಾನೆ, ಆದರೆ ಹರಟೆಯ ಮೂರ್ಖನು ಬೀಳುವನು.

11ನೀತಿವಂತನ ಬಾಯಿಯು ಜೀವದ ಬುಗ್ಗೆ; ಆದರೆ ದುಷ್ಟನ ಬಾಯಿ ಹಿಂಸೆಯನ್ನು ಮರೆಮಾಡುತ್ತದೆ.

12ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ; ಆದರೆ ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚುತ್ತದೆ.

13ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕುತ್ತದೆ; ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.

14ಜ್ಞಾನಿಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.

15ಐಶ್ವರ್ಯವಂತರಿಗೆ ಸಂಪತ್ತೇ ಅವರ ಬಲವಾದ ಕೋಟೆ; ಆದರೆ, ಬಡತನವೇ ಬಡವರ ನಾಶನಕ್ಕೆ ಕಾರಣ.

16ನೀತಿವಂತರ ದುಡಿತವು ಜೀವವಾಗುವುದು; ಆದರೆ, ದುಷ್ಟರ ಆದಾಯವು ಪಾಪ ಹಾಗು ಮರಣ.

17ಶಿಸ್ತನ್ನು ಕೈಗೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು; ಆದರೆ ತಿದ್ದುಪಾಟನ್ನು ತಿರಸ್ಕರಿಸುವವನು ಇತರರ ದಾರಿತಪ್ಪಿಸುವನು.

18ದ್ವೇಷವನ್ನು ಮರೆಮಾಚುವವನು ಸುಳ್ಳುಗಾರ ಮತ್ತು ಚಾಡಿ ಹೇಳುವವನು ಮೂರ್ಖನು.

19ಅತಿಯಾದ ಮಾತುಗಳಿಂದ ಪಾಪವು ಕೊನೆಗೊಳ್ಳುವುದಿಲ್ಲ. ಆದರೆ ಜ್ಞಾನವಂತನು ತನ್ನ ನಾಲಿಗೆಯನ್ನು ತಡೆಯುವನು.

20ನೀತಿವಂತರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ; ದುಷ್ಟರ ಹೃದಯವು ಬೆಲೆಯಿಲ್ಲದ್ದು.

21ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ, ಜ್ಞಾನದ ಕೊರತೆಯಿಂದ ಬುದ್ಧಿಹೀನರು ಸಾಯುತ್ತಾರೆ.

22ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು; ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.

23ಮೂರ್ಖನಿಗೆ ಕೇಡು ಮಾಡುವುದರಲ್ಲಿ ಆನಂದ; ಆದರೆ ತಿಳುವಳಿಕೆಯ ವ್ಯಕ್ತಿಯು ಜ್ಞಾನದಲ್ಲಿ ಸಂತೋಷಪಡುತ್ತಾನೆ.

24ದುಷ್ಟನ ಭೀತಿಯೇ ಅವನನ್ನು ಹಿಂದಿಕ್ಕುವುದು; ಆದರೆ ನೀತಿವಂತರ ಇಷ್ಟವು ಸಫಲವಾಗುವುದು.

25ಬಿರುಗಾಳಿಯು ಬೀಸಿದರೆ, ದುಷ್ಟರು ಇಲ್ಲವಾಗುವರು; ಆದರೆ ನೀತಿವಂತರು ಶಾಶ್ವತವಾಗಿ ನಿಲ್ಲುವರು.

26ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, ಯಜಮಾನನಿಗೆ ಸೋಮಾರಿಯು ಹಾಗೆಯೇ ಇರುವನು.

27ಯೆಹೋವ ದೇವರ ಭಯವು ಜೀವನದ ದಿನಗಳನ್ನು ಹೆಚ್ಚಿಸುತ್ತದೆ; ದುಷ್ಟರ ವರ್ಷಗಳು ಕಡಿಮೆ ಆಗುವವು.

28ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು; ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.

29ಯೆಹೋವ ದೇವರ ಮಾರ್ಗವು ನಿರ್ದೋಷಿಗಳಿಗೆ ಆಶ್ರಯವಾಗಿದೆ; ಆದರೆ ಕೇಡು ಮಾಡುವವರಿಗೆ ಅದು ವಿನಾಶಕರವಾಗಿದೆ.

30ನೀತಿವಂತರು ಎಂದಿಗೂ ಕದಲುವುದೇ ಇಲ್ಲ; ಆದರೆ ದುಷ್ಟರು ಭೂಮಿಯಲ್ಲಿ ನಿಲ್ಲುವುದಿಲ್ಲ.

31ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ; ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.

32ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು, ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.

Sources and attribution