KING JAMES BIBLEಹುಡುಕಿ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಜ್ಞಾನೋಕ್ತಿಗಳು 19

ಎಲ್ಲಾ · ಜ್ಞಾನೋಕ್ತಿಗಳುಹುಡುಕಿ

1ಬುದ್ಧಿಹೀನನ ವಕ್ರ ತುಟಿಗಳಿಗಿಂತ, ನಿರ್ದೋಷವಾಗಿ ನಡೆಯುವ ಬಡವನು ಉತ್ತಮ.

2ಪರಿಜ್ಞಾನವಿಲ್ಲದ ಆಸಕ್ತಿಯು ಯುಕ್ತವಲ್ಲ; ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು.

3ಮನುಷ್ಯನ ಬುದ್ಧಿಹೀನತೆ ಅವನ ದುರ್ಗತಿಗೆ ದಾರಿಯಾಗಿದೆ, ಆದರೂ ಅವನ ಹೃದಯವು ಯೆಹೋವ ದೇವರಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.

4ಸಂಪತ್ತು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ; ಆದರೆ ಬಡವನು ತನ್ನ ಆಪ್ತಸ್ನೇಹಿತನಿಂದ ದೂರವಾಗುತ್ತಾನೆ.

5ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು.

6ಅನೇಕರು ಅಧಿಪತಿಯಿಂದ ಸಹಾಯ ಪಡೆಯುತ್ತಾರೆ. ಕಾಣಿಕೆಗಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.

7ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ; ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ ಅವನಿಗೆ ಏನೂ ದೊರಕದು.

8ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ; ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ.

9ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ; ಸುಳ್ಳಾಡುವವನು ಹಾಳಾಗಿ ಹೋಗುವನು.

10ಬುದ್ಧಿಹೀನನಿಗೆ ಭೋಗಜೀವನವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವುದು ಸೇವಕನಿಗೆ ಯುಕ್ತವೇ ಅಲ್ಲ.

11ಮನುಷ್ಯನ ಜ್ಞಾನವು ತಾಳ್ಮೆಯನ್ನು ನೀಡುತ್ತದೆ; ಅಪರಾಧವನ್ನು ಲಕ್ಷಿಸದೆ ಇರುವುದು ಅವನಿಗೆ ಮಹಿಮೆಯಾಗಿದೆ.

12ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.

13ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕರನು; ಜಗಳವಾಡುವ ಹೆಂಡತಿ ಯಾವಾಗಲೂ ತೊಟ್ಟಿಕ್ಕುವ ಹನಿ.

14ಮನೆಯೂ ಸಂಪತ್ತೂ ಪಿತೃಗಳ ಸ್ವಾಸ್ತ್ಯವು; ವಿವೇಕಿಯಾದ ಹೆಂಡತಿಯು ಯೆಹೋವ ದೇವರಿಂದಲೇ.

15ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುತ್ತದೆ; ಸೋಮಾರಿಯು ಹಸಿವೆಗೊಳ್ಳುವನು.

16ಯಾರು ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ, ಆದರೆ ಅವುಗಳನ್ನು ಅಸಡ್ಡೆ ಮಾಡುವವನು ಸಾಯುವನು.

17ಬಡವರಿಗೆ ದಯೆ ತೋರಿಸುವವನು ಯೆಹೋವ ದೇವರಿಗೆ ಸಾಲ ಕೊಡುತ್ತಾನೆ; ಆತನು ಅವನ ಉಪಕಾರಕ್ಕಾಗಿ ಪ್ರತ್ಯುಪಕಾರ ಮಾಡುವನು.

18ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಮರಣಕ್ಕೆ ನೀನು ಕಾರಣನಾಗಬೇಡ.

19ಕೋಪಿಷ್ಟನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ, ತಿರುಗಿ ನೀನು ಬಿಡಿಸಬೇಕಾಗುವುದು.

20ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು; ಕಡೆಯಲ್ಲಿ ನೀನು ಜ್ಞಾನಿಯಾಗುವೆ.

21ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ; ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು.

22ನಿಷ್ಠೆಯು ಮನುಷ್ಯನನ್ನು ಆಕರ್ಷಕನನ್ನಾಗಿ ಮಾಡುತ್ತದೆ. ಬಡವನು ಸುಳ್ಳುಗಾರನಿಗಿಂತ ಲೇಸು.

23ಯೆಹೋವ ದೇವರ ಭಯವು ಜೀವದಾಯಕವು; ಆಗ ಅವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವುದಿಲ್ಲ.

24ಮೈಗಳ್ಳನು ಪಾತ್ರೆಯೊಳಗೆ ತನ್ನ ಕೈಯನ್ನು ಮುಳುಗಿಸಿ, ಅವನು ಅದನ್ನು ಮತ್ತೆ ತನ್ನ ಬಾಯಿಗೆ ತರುವುದಿಲ್ಲ!

25ಪರಿಹಾಸ್ಯಗಾರನನ್ನು ಹೊಡೆದರೆ, ಮುಗ್ಧರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿದರೆ, ಅವನು ಪರಿಜ್ಞಾನವನ್ನು ಗ್ರಹಿಸುವನು.

26ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ.

27ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ, ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.

28ಭ್ರಷ್ಟನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿ ಮಾಡುತ್ತದೆ; ದುಷ್ಟನ ಬಾಯಿಯು ದ್ರೋಹವನ್ನು ನುಂಗುವುದು.

29ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ, ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.

Sources and attribution